ರಾಮಯ್ಯ, ಪಿ ಆರ್
	1894-1970. ಪ್ರಸಿದ್ಧ ಪತ್ರಿಕೋದ್ಯಮಿ. ತಾಯಿನಾಡು ಪತ್ರಿಕೆಯ ಸ್ಥಾಪಕ ಸಂಪಾದಕರು. 1894 ಸೆಪ್ಟೆಂಬರ್ 10 ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ಪಾಲಹಳ್ಳಿರಾಮಸ್ವಾಮಯ್ಯ, ತಾಯಿ ಸುಬ್ಬುಲಕ್ಷಮ್ಮ, ಸಂಪ್ರದಾಯಸ್ಥ ವೈದಿಕ ಕುಟುಂಬ. ಮೈಸೂರು ಮರಿಮಲ್ಲಪ್ಪ ಶಾಲೆಯಲ್ಲಿ ಆರಂಭ ವ್ಯಾಸಂಗವನ್ನು ಮುಗಿಸಿದರು. ಕೆವಲ ಎರಡೂವರೆ ರೂಪಾಯಿಗಳನ್ನು ಕೈಯಲ್ಲಿ ಹಿಡಿದು, ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಹೇಳದೆ ಕೇಳದೆ ಕಾಶಿಗೆ ಪ್ರಯಾಣ. ಇವರು ಕಾಶಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ. ಪದವಿ ಪಡೆದರು. ಮುಂದೆ ಎಂ.ಎಸ್.ಸಿ. ತರಗತಿಗೆ ಸೇರಿದರಾದರೂ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ವ್ಯಾಸಂಗವನ್ನು ನಿಲ್ಲಿಸಿದರು. ಪರೀಕ್ಷೆಗೆ ಕೇವಲ ಎರಡು ತಿಂಗಳಿತ್ತು. ಕಾಶಿವಿದ್ಯಾಲಯದ ಕುಲಪತಿ ರಾಮಯ್ಯನವರು ಪರೀಕ್ಷೆಗೆ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದರು. ಎರಡು ಗಂಟೆಗಳ ಕಾಲ ಕುಳ್ಳಿರಿಸಿಕೊಂಡು ಬುದ್ಧಿವಾದ ಹೇಳಿದರು. ಗಾಂಧೀಜಿ ಕರೆ ಕೊಟ್ಟಿದ್ದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸುವ ತಮ್ಮ ಅಚಲ ನಿರ್ಧಾರ ಹೇಳಿದರು. ಮಾಳವೀಯ ಅವರು ರಾಮಯ್ಯನವರಿಗೆ ಖರ್ಚಿಗೆ 50ರೂಪಾಯಿ ಕೊಟ್ಟು ಆಶೀರ್ವದಿಸಿ ಕಳುಹಿಸಿದರು. ರಾಮಯ್ಯನವರು ಅಸಹಕಾರ ಚಳುವಳಿ ಅವಧಿಯಲ್ಲಿ ಗಾಂಧೀಜಿ ಸೂಚಿಸಿದ, ಸತ್ಯಾಗ್ರಹಿಗಳಿಗೆ ಅಗತ್ಯವೆನಿಸಿದ ಕಠಿಣ ವ್ರತಾಚಾರಣೆಯನ್ನೆಲ್ಲಾ ಅನುಸರಿಸಿದರು. ಅನಂತರ ಮದ್ರಾಸಿಗೆ ತೆರಳಿ ಪತ್ರಿಕೋದ್ಯಮದಲ್ಲಿ ಆಸಕ್ತಿ ವಹಿಸಿ, ಮದರಾಸಿನಿಂದ ಪ್ರಕಟವಾಗುತ್ತಿದ್ದ ಸ್ವರಾಜ್ಯ ಪತ್ರಿಕೆಗೆ ಉಪಸಂಪಾದಕರಾಗಿ ಕೆಲಕಾಲ ದುಡಿದರು. ಅನಂತರ ಬೆಂಗಳೂರಿಗೆ ಹಿಂತಿರುಗಿ ಸ್ವರಾಜ್ಯ ಪತ್ರಿಕೆಯ ವರದಿಗಾರ ಹಾಗೂ ಪ್ರತಿನಿಧಿ ಆಗಿ ಸ್ವಲ್ಪ ಕಾಲ ಕೆಲಸಮಾಡಿ ಮೈಸೂರಿಗೆ ಹೋದರು (1928). ಅಲ್ಲಿ ಎಂ. ವೆಂಕಟಕೃಷ್ಣಯ್ಯನವರ ಶಿಷ್ಯರಾಗಿ ಸಾಧ್ವಿ, ಸಂಪದಭ್ಯುದಯ, ವೆಲ್ತ್ ಆಫ್ ಮೈಸೂರು ಮುಂತಾದ ಪತ್ರಿಕೆಗಳ ಉಪಸಂಪಾದಕರಾಗಿ ಕೆಲಸಮಾಡಿದರು. 1927 ಸಪ್ಟೆಂಬರ್ 12 ರಂದು ಸ್ವತಂತ್ರವಾಗಿ ತಾಯಿನಾಡು ಪತ್ರಿಕೆಯನ್ನು ಆರಂಭಿಸಿದರು. ಆರಂಭದಲ್ಲಿ ವಾರಪತ್ರಿಕೆ, ಎರಡೇಪುಟ, ಬೆಲೆ ಒಂದು ಕಾಸು. ನಂತರ ಅರ್ಧ ಕ್ರೌನ್. ಅನಂತರ ನಾಲ್ಕುಪುಟ. ಬಿಡಿಪ್ರತಿ ಬೆಲೆ ಮೂರುಕಾಸು. ವಾರ್ಷಿಕ ಚಂದಾ ಎರಡು ರೂಪಾಯಿ. ಅಂಚೆಯಲ್ಲಿ ಒಟ್ಟಿಗೆ ಐದು ಪ್ರತಿ ತರಿಸಿಕೊಂಡರೆ ಒಂದು ಪತ್ರಿಕೆ ಉಚಿತ. ವ್ಯಾಪರೀ ಆಕರ್ಷಣೆಗಳು. ಚಂದಾದಾರ ಸಂಖ್ಯೆ 500ಕ್ಕೇರಿತು. ಪತ್ರಿಕೆ ವಾರಕ್ಕೆರಡು ಬಾರಿ ಪ್ರಕಟವಾಗುತ್ತಿತ್ತು. ತಾಯಿನಾಡು ದಿನಪತ್ರಿಕೆಯಾಗಿ ಆರಂಭವಾದದ್ದು ಒಂದು ವಿಶೇಷ ಸಂದರ್ಭ. 1928ರ ಜುಲೈ 30ರಂದು ಬೆಂಗಳೂರಿನಲ್ಲಿ ನಡೆದ ಗಣೇಶನ ಗಲಾಟೆ, ಪತ್ರಿಕೆಯಲ್ಲಿ ಪ್ರಕಟವಾದ ವರದಿ-ಲೇಖನ ಉಗ್ರವಾಯಿತೆಂದು, ಸರಕಾರದ ಗದಾಪ್ರಹಾರ. 14 ದಿನ ಪತ್ರಿಕೆ ಪ್ರಕಟಣೆಗೆ ತಡೆಯಾಜ್ಞೆ.

ರಾಮಯ್ಯನವರಿಗೆ `ನ್ಯೂ ಲೈಫ್ ಎಂಬ ಪತ್ರಿಕೆ ಹೊರಡಿಸಲು ಅನುಮತಿ ದೊರಕಿತ್ತು. `ನ್ಯೂ ಲೈಪ್ ನಲ್ಲಿ ಸರಕಾರದ ನಿಷೇಧಾಜ್ಞೆ ಖಂಡಿಸಿ ಲೇಖನ ಪ್ರಕಟವಾಯಿತು. ತಾಯಿನಾಡು ಪತ್ರಿಕೆ ನಿಲುಗಡೆ ಉದ್ದೇಶ ವಿಫಲವಾಯಿತು. ಸರಕಾರಕ್ಕೆ ಮುಖಭಂಗ. ಸರಕಾರದ ತಡೆಯಾಜ್ಞೆ ತಾಯಿನಾಡುವಿಗೆ ವರದಾನವಾಯಿತು. 14 ದಿನಗಳ ನಂತರ ಮತ್ತಷ್ಟು ಮೈದುಂಬಿ ತಾಯಿನಾಡು ಪ್ರಕಟವಾಯಿತು-ದಿನಪತ್ರಿಕೆಯಾಗಿ ಜನಪ್ರಿಯತೆ ಹೆಚ್ಚಿ, ನಾಲ್ಕು ಪುಟಗಳ ಸಂಚಿಕೆಯಾಯಿತು.

ಅದನ್ನು ಮೈಸೂರಿನಿಂದ ಸ್ವಲ್ಪಕಾಲ ಪ್ರಕಟಿಸಿ, ಅನಂತರ ಪತ್ರಿಕೆಯನ್ನು ಬೆಂಗಳೂರಿಗೆ ವರ್ಗಾಯಿಸಿದರು (1929). 1932 ರಲ್ಲಿ ತಾಯಿನಾಡು ಮುದ್ರಣಾಲಯವನ್ನು ಆರಂಭಿಸಿ ಪತ್ರಿಕೆಯ ರೂಪರೇಷೆಯನ್ನು ಉತ್ತಮಪಡಿಸಿ ಅದನ್ನು ಒಂದು ಆದರ್ಶ ದಿನ ಪತ್ರಿಕೆಯನ್ನಾಗಿ ಮಾಡಿದರು. ಪಿ.ಆರ್.ರಾಮಯ್ಯನವರ ಇಡೀಕುಟುಂಬ ತಾಯಿನಾಡುವಿನ ಪ್ರಕಟಣೆಯಲ್ಲಿ ತೊಡಗಿಕೊಂಡಿತ್ತು. ತಮ್ಮಂದಿರಾದ ಆರ್.ಎಸ್.ನಾರಾಯಣ, ಪಿ.ಆರ್.ವೆಂಕಟೇಶ, ಪಿ.ಆರ್.ಶ್ರೀನಿವಾಸನ್, ಪಿ.ಆರ್.ಗೋವಿಂದ, ಪಿ.ಆರ್.ಬ್ರಹ್ಮಾನಂದ ಇವರೆಲ್ಲ ಪತ್ರಿಕೆಗಳನ್ನು ಪ್ರಕಟಣೆ ಕಾರ್ಯದಲ್ಲಿ ನೆರವಾಗುತ್ತಿದ್ದರು. ಸಂಜೆ ಶಾಲೆ ಮುಗಿಸಿಕೊಂಡು ಬಂದು ಪತ್ರಿಕೆಯ ಮಾರಾಟಕ್ಕೆ ಸಿದ್ಧವಾಗುತ್ತಿದ್ದರು. ತಾಯಿನಾಡು ಪತ್ರಿಕೆಯ ಜೊತೆಗೆ ಡೈಲಿ ನ್ಯೂಸ್ ಎಂಬ ಇಂಗ್ಲಿಷ್ ದಿನಪತ್ರಿಕೆಯನ್ನೂ ಇವರು ಸ್ವಲ್ಪ ಕಾಲ ನಡೆಸಿದರು. ಇದರ ಸಂಪಾದಕರು ಪಿ.ಬಿ.ಶ್ರೀನಿವಾಸ. ಪತ್ರಿಕೆಯ ಗುಣಮಟ್ಟ ಹೆಚ್ಚಿಸಿ ಅದನ್ನು ಜನಪ್ರಿಯಗೊಳಿಸಲು ರಾಮಯ್ಯನವರು ಪ್ರಯತ್ನಿಸಿದರು. ದೇಶವಿದೇಶಗಳಿಂದ ತಂತಿ ಸಮಾಚಾರಗಳನ್ನು ತರಿಸಿಕೊಳ್ಳುತ್ತಿದ್ದರು. ಯುದ್ಧಕಾಲದಲ್ಲಿ ಯುದ್ಧ ಸುದ್ದಿಗಳನ್ನು ವರದಿಮಾಡಲು, ಪಿ.ಬಿ.ಶ್ರೀನಿವಾಸರನ್ನು ಕಳುಹಿಸಿತು. ನಾಲ್ವಡಿ ಕೃಷ್ಣರಾಜರ ವಿದೇಶ ಪ್ರವಾಸದ ವರದಿ ಗೌರವನ್ನೂ ವಿಶೇಷ ವರದಿಗಳನ್ನು ಕಳುಹಿಸಿತು.

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಪತ್ರಿಕೆ ಕಾಂಗ್ರೆಸ್ಸಿನ ಪರ ನಿಲುವನ್ನು ತಾಳಿತ್ತು. ಆದರೆ ವಿರೋಧಪಕ್ಷಗಳ ಸುದ್ದಿಗಳಿಗೂ ಮಾನ್ಯತೆ ನೀಡಿತು. ಸುದ್ದಿಗಳಲ್ಲಿ ಉತ್ಪ್ರೇಕ್ಷೆಯಿಲ್ಲ. ಸುದ್ದಿ ಸ್ವಾತಂತ್ರ್ಯಕ್ಕೆ ಆದ್ಯತೆ. ಬ್ರಿಟಿಷ್ ಪ್ರಭುತ್ವದ ದರ್ಪ, ಆಶ್ರಿತ ಸಂಸ್ಥಾನವಾದ ಮೈಸೂರಿನಲ್ಲಿ, ಅರಸರು ಒಡೆಯರಾಗಿದ್ದರೂ ನಡೆದದ್ದು, ದಿವಾನರ ನಿರಂಕುಶಾಧಿಕಾರ. ಪತ್ರಿಕೆ ಬದುಕಬೇಕು, ಅದನ್ನು ಆಶ್ರಯಿಸಿದವರ ಹಿತಕಾಪಾಡಬೇಕೆಂಬ ರಾಮಯ್ಯನವರ ಕಳಕಳಿ. ಅದಕ್ಕೆ ಅವರು ಅನುಸರಿಸಿದ್ದು ಮಧ್ಯಮ ಮಾರ್ಗ. ಕ್ರಾಂತಿಕಾರಕ, ತೀಕ್ಷ್ಣ ಬರಹಗಳಿಗೆ ಆಸ್ಪದವಿಲ್ಲ. ಸರಳ ಸುಲಭ ನಿರೂಪಣೆ, ಸತ್ಯಕ್ಕೆ ಲೋಪವಿಲ್ಲದ ನಿರೂಪಣೆ.

ಹೊಸಪತ್ರಿಕೆಗಳ ಉದಯ, ಸ್ಪರ್ಧೆ, ಪೈಪೋಟಿ, ತಾಯಿನಾಡು ಬೆಳಗಿನ ಪತ್ರಿಕೆಯಾಯಿತು. ಪ್ರಸಾರ ಇಳಿಮುಖ, ಜಾಹಿರಾತು ಇಳಿಮುಖ, ಸಾಲದಹೊರೆ ಏರಿಕೆ. `ಪತ್ರಿಕೆ ಎಲ್ಲಾದರೂ ಬೆಳೆಯಲಿ ಎಂಬ ಆಸೆ ಕಾಮಗಾರಿ ಕಂಟ್ರಾಕ್ಟರಿಗೆ ಮಾರಿದರು. 1957ರಲ್ಲಿ ಪತ್ರಿಕಾ ಜೀವನದಿಂದ ನಿವೃತ್ತರಾದರು. ತಾಯಿನಾಡು ಹೊಸ ಮಾಲಿಕತ್ವದಲ್ಲೂ ಅರಳಿಲಿಲ್ಲ. 1965ರಲ್ಲಿ ಪತ್ರಿಕೆ ನಿಂತಿತು. ಡೈಲಿ ನ್ಯೂಸ್ ಪತ್ರಿಕೆ 1951ರಲ್ಲಿ ಯೇ ನಿಂತು ಹೋಗಿತ್ತು.

ಪತ್ರಿಕಾ ನಿವೃತ್ತಿಯನಂತರ ರಾಮಯ್ಯನವರು ಬರಹದಲ್ಲಿ ಆಧ್ಯಾತ್ಮ ಗ್ರಂಥಗಳ ಅಧ್ಯಯನದಲ್ಲಿ ಕಾಲಕಳೆದರು. 1905ರ ಮೇ 25ರಂದು ಅಸ್ವಸ್ತತೆಯಿಂದ ನಿಧನರಾದರು.

ರಾಮಯ್ಯನವರು ಸಲ್ಲಿಸಿದ ಸಮಾಜಸೇವೆಯೂ ಗಣ್ಯವಾದುದು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಇವರು 1942 ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ದಸ್ತಗಿರಿಯಾಗಿ ಕಾರಾಗೃಹ ವಾಸವನ್ನೂ ಅನುಭವಿಸಿದರು. ಬೆಂಗಳೂರು ಪುರಸಭೆಯ ಸದಸ್ಯರಾಗಿ (1947), ಮೈಸುರು ವಿಧಾನಸಭಾ ಸದಸ್ಯರಾಗಿ (1952) ಇವರು ಸೇವೆ ಸಲ್ಲಿಸಿದ್ದಾರೆ. ಮೈಸೂರು ಸಂಸ್ಥಾನದ ಪತ್ರಿಕೋದ್ಯಮಿಗಳ ಸಂಘ, ಹಿಂದೀ ಪ್ರಚಾರ ಪರಿಷತ್ತು, ಮೈಸೂರು ಸ್ವಾತಂತ್ರ್ಯ ಹೋರಾಟ ಸಮಿತಿ-ಮುಂತಾದ ಹತ್ತಾರು ಸಂಘಸಂಸ್ಥೆಗಳಿಗೂ ಇವರ ಸೇವೆ ಸಂದಿದೆ.

 	ರಾಮಯ್ಯನವರು ಅನೇಕ ಲೇಖನಗಳನ್ನೂ ಫ್ರಾನ್ಸಿನ ಮಹಾಕ್ರಾಂತಿ (1933). ಆಧುನಿಕ ರಷ್ಯಾ (1943). ಪೊಲಿಟಿಕಲ್ ಎವಲ್ಯೂಷನ್ ಆಫ್ ಮೈಸೂರು (1962). ದಯಾಸಾಗರ್ ಎಂ. ವೆಂಕಟಕೃಷ್ಣಯ್ಯನವರ ಜೀವನಚರಿತ್ರೆ (1969) ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಬರೆದ ಗಾಂಧೀಜಿ ಎಂಬ ಪುಸ್ತಕ ಇವರ ನಿಧನಾನಂತರ ಪ್ರಕಟವಾಯಿತು.

 	ಆಗಿನ ಮೈಸೂರು ರಾಜ್ಯ ಸರ್ಕಾರ 1966 ರಲ್ಲಿ ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು. 		 *
											(ಪರಿಷ್ಕರಣೆ: ಎಂ.ಬಿ.ಸಿಂಗ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ